ಓಲ್ಡನ್ಬರ್ಗ್‌, ಹರ್ಮನ್: 1854-1920. ಪ್ರಾಚೀನ ಭಾರತದ ವಿವಿಧ ಮುಖಗಳನ್ನು ಸಂಶೋಧನಾತ್ಮಕ ದೃಷ್ಟಿಯಿಂದ ಅಭ್ಯಸಿಸಿ ಅನೇಕ ಉದ್ಗ್ರಂಥಗಳನ್ನು ರಚನೆ ಮಾಡಿರುವ ವಿದ್ವಾಂಸ. ಬರ್ಲಿನ್ನಲ್ಲಿ ಪ್ರಾಧ್ಯಾಪಕನಾಗಿದ್ದುಕೊಂಡು ಗೃಹ್ಯಸೂತ್ರಗಳನ್ನೂ (1886) ಋಗ್ವೇದದ ಸೂತ್ರಗಳನ್ನೂ (1888) ಇಂಗ್ಲಿಷ್ ಭಾಷೆಗೆ ಪರಿವರ್ತಿಸಿ, ವೈದಿಕಧರ್ಮ (1894) ಋಗ್ವೇದ ಟಿಪ್ಪಣಿಗಳ ಎರಡು ಸಂಪುಟಗಳು (1909,1912)-ಇತ್ಯಾದಿ ಉದ್ಗ್ರಂಥಗಳನ್ನು ಬರೆದಿದ್ದಾನೆ. ಮಹಾಭಾರತದ ಹಸ್ತಪ್ರತಿಗಳನ್ನು ಕಲೆಹಾಕಿ, ಅವನ್ನೆಲ್ಲ ಪರಿಶೀಲಿಸಿ ಮಹಾಭಾರತದ ಉತ್ಪತ್ತಿ ಹಾಗು ಬೆಳೆವಣಿಗೆಯ ಬಗ್ಗೆ ಒಂದು ಅಪುರ್ವ ಗ್ರಂಥವನ್ನು ಜರ್ಮನ್ ಭಾಷೆಯಲ್ಲಿ ಬರೆದಿದ್ದಾನೆ. ಪ್ರಾಚೀನ ಗದ್ಯಗ್ರಂಥಗಳ ಶೈಲಿಯನ್ನು ಕುರಿತು ಈತ ರಚಿಸಿದ ಗ್ರಂಥ ಮಹತ್ತ್ವದ್ದಾಗಿದೆ. 

ಇದಲ್ಲದೆ ಪಾಲೀ ಭಾಷೆಯ ಕ್ಷೇತ್ರದಲ್ಲಿ ಈತ ಮಾಡಿದ ಸಾಧನೆ ಭಾರತೀಯ ಸಾಹಿತ್ಯಚರಿತ್ರೆಯಲ್ಲಿ ಒಂದು ಮುಖ್ಯ ಮೈಲಿಗಲ್ಲು. ವಿನಯಪಿಟಕ, ದೀಪವಂಶ ಇತ್ಯಾದಿ ಬೌದ್ಧಗ್ರಂಥಗಳ ಪ್ರಕಟಣೆ ಆಸಕ್ತರಿಗೆ ಕೈದೀವಿಗೆಯಾಗಿದೆ. ಲಂಡನ್ನಿನ ಇಂಡಿಯ ಆಫೀಸ್ ಗ್ರಂಥಾಲಯದಲ್ಲಿರುವ ಪಾಲೀ ಹಸ್ತಪ್ರತಿಸೂಚಿಯನ್ನು ಈತನೇ ಸಿದ್ಧಪಡಿಸಿದ್ದಾನೆ. ಗೌತಮ ಬುದ್ಧನ ಜೀವನ ಹಾಗೂ ತತ್ತ್ವಜ್ಞಾನದ ಬಗ್ಗೆ ಈತ ಬರೆದಿರುವ ಗ್ರಂಥ ಹೆಸರು ಗಳಿಸಿದೆ.
(ಬಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ